Friday, May 3, 2013

ಕನಸು ಕಾಣೋ ರಾಜಕುಮಾರಿ ...

ಆಕೆ ಸದಾ ಕನಸು ಕಾಣೋ ರಾಜಕುಮಾರಿ.. ಕನಸೇ ಬದುಕು.. ಕನಸೇ ಉಸಿರು.. ಹಿಂದಿಲ್ಲ..ಮುಂದಿಲ್ಲ...ಕನಸು ಸಾಗಳು ದಾರಿ ಬೇಕಿಲ್ಲ..
ಅದೇ ಗುಲ್ಮೊಹರ್ ಮರಗಳ ಸಾಲು.. ಚಟಪಟನೆ ಬೀಳೋ ಮಳೆಹನಿಗಳ ಇನಿದನಿ.. ದೂರದಿಂದೆಲ್ಲೋ ಕೇಳಿ ಬರುತ್ತಿರೋ ಕೋಗಿಲೆಯ ಇಂಚರ..
ಜುಳು ಜುಳು ಹರಿಯುತ್ತಿರೋ ನೀರಿನ ತಾಳ ತಪ್ಪದ ಹಿಮ್ಮೇಳ.. ಇವಿಷ್ಟೇ ಸಾಕು ಈಕೆ ಕನಸು ಕಟ್ಟಲು.. ಬದುಕು ಸಾಗಿಸಲು,,,

ಬೆಟ್ಟದ ಮೇಲೊಂದು ಪುಟ್ಟ ಕುಟೀರ .. ಸುತ್ತಮುತ್ತ ಹಬ್ಬಿದ ಮರಗಳ ಸಾಲು.. ಆಗೊಮ್ಮೆ ಈಗೊಮ್ಮೆ ನೆಲವನ್ನು ಸೇರುತ್ತಿರೋ ತರಗೆಲೆಗಳ ಚರಪರ ಸದ್ದು.. ಸುಯ್ಯೆಂದು ಬೀಸುತ್ತಿರೋ ತಣ್ಣನೆಯ ಗಾಳಿ.. ಅಲ್ಲೊಬ್ಬ ಹೈದ.. ಈಕೆಯ ಹೃದಯದಲ್ಲಿ ಪ್ರೀತಿಯ ಬೀಜವನ್ನು ಬಿತ್ತಲು.. ಮನದಲ್ಲಿ ಪ್ರೇಮದ ಕಾರಂಜಿಯನ್ನು ಹರಿಸಲು.. ನೊಂದಾಗ ಮುದ್ದಾಡಿ ರಮಿಸಲು.. ನಿದ್ದೆ ಬಂದಾಗ ಜೋಗುಳ ಹಾಡಲು.. ತಟ್ಟಿ ಮಲಗಿಸಲು.. ಬೆಳದಿಂಗಳ ತಂಪಾದ ರಾತ್ರಿಯಲ್ಲಿ ಕನಸನ್ನು ಜೊತೆ ಜೊತೆಯಾಗಿ ನೇಯಲು..
ಈಕೆಯ ದೃಷ್ಟಿಯಲ್ಲಿ ಕನಸು ಮಾರೋ ಸೊತ್ತಲ್ಲ.. ಕೊಂಡುಕೊಳ್ಳಲು ಯಾರೂ ಬೇಕಿಲ್ಲ.. ಹಂಚಿಕೊಳ್ಳಲು ಜೊತೆಗಾರನಿದ್ದರಷ್ಟೆ ಸಾಕು..
ಗೊತ್ತು ಈಕೆಗಿದು ಕಾಂಕ್ರೀಟು ಕೊಂಪೆಯ ನಡುವೆ ಬತ್ತಿ ಹೋದ ಕನಸು, ಮುರಿದ ಮನಸುಗಳ ನಡುವೆ ಇವೆಲ್ಲ ಅಸಾದ್ಯವೇನೋ ಅನ್ನೋ ಸತ್ಯ.. ಮತ್ತೆ ದೂರದೆಲ್ಲೆಲ್ಲೋ ಕುದುರೆಯೇರಿ ಬರುತ್ತಿರೋ ಕನಸಿನ ರಾಜಕುಮಾರ .. ಟಕ್ ಟಕ್ ಸದ್ದು.... ಮತ್ತೆ ಜೀವತಳೆಯುವಂತೆ ಮಾಡುತ್ತಿದೆ.. ಬತ್ತಿದ ಒರತೆಯಲ್ಲಿ ನೀರ ಚಿಮ್ಮಿಸುತಿದೆ..